ಕನ್ಯಾದಾನವಲ್ಲ – ಅದು ಕನ್ಯಾ ಆಧಾನ
Facebook (ಫೇಸ್ ಬುಕ್ ) ನಲ್ಲಿ ಕಂಡ ಒಂದು ಅಂಕಣ.
ಕನ್ಯಾದಾನವಲ್ಲ – ಅದು ಕನ್ಯಾ ಆಧಾನ.
ಅದು ಯಾವ ಕಾರಣದಿಂದ ಬಂತು ಎನ್ನುವುದೇ ಆಶ್ಚರ್ಯ! ಕನ್ಯೆಯು ದಾನ ಕೊಡುವ ವಸ್ತುವಲ್ಲ.
ಅಲ್ಲಿ ಆಧಾನ ಎಂದಿದೆ. ಅಂದರೆ ವರನಲ್ಲಿ ರಕ್ಷಣೆಗಾಗಿ ನೀಡುವುದು ಎಂದು ಅರ್ಥವಾಗುತ್ತದೆಯೇ ವಿನಃ ದಾನವಾಗುವುದಿಲ್ಲ. ಅದು ಯಾವುದೋ ಕಾರಣದಿಂದ ದಾನ ಎಂದು ಅಪಾರ್ಥವಾಗಿ ಬಳಕೆಯಲ್ಲಿ ಬಂದಿದೆ.
ಕನ್ಯಾಧಾನವು ಪುಣ್ಯದ ಕೆಲಸ ಹೌದು. ಅವಳು ಮತ್ತೊಂದು ವಂಶವನ್ನು ಬೆಳೆಸುವುದರಿಂದ ಅವಳು ಸಂಪಾದಿಸುವ ಪುಣ್ಯವು ಕೊಟ್ಟ ತಂದೆಗೆ ಸಿಕ್ಕೇ ಸಿಗುತ್ತದೆ.
ಅದು ದಾನಕೊಟ್ಟ ಪುಣ್ಯವಲ್ಲ. ಕನ್ಯಾ ಆಧಾನ ಎಂದು ಹೇಳಿದೆಯೇ ಹೊರತು ಕನ್ಯಾದಾನವಲ್ಲ! ಕನ್ಯೆಯು ಪ್ರೌಢಳಾಗುವವರೆಗೆ ಪೋಷಿಸುವುದು ತಂದೆಗೆ ಸಾಧ್ಯವಾಗುತ್ತದೆ.
ನಂತರ ಪ್ರೌಢತ್ವ ಬಂದ ಮೇಲೆ ಮಗಳನ್ನು ಪೋಷಿಸುವುದು ತಂದೆಗೆ ಸಾಧ್ಯವಿಲ್ಲ. ಹಾಗಾಗಿ ಅವಳನ್ನು ವರನ ಕೈಗೆ ಕೊಡುವಂತಾದ್ದು. ಇವಳನ್ನು ಇನ್ನು ನೀನು ಪೋಷಿಸಬೇಕು ಎಂದು.
ಆವಾಗಲೂ ಅವರ ಮುಂದುವರೆದ ವಾಗ್ದಾನವೆಂದರೆ ಇವರಲ್ಲಿ ಉತ್ತಮನಾಗತಕ್ಕಂತಹ ಸಾತ್ಪ್ರಜೆಯನ್ನು ಪಡೆದು ಮಗನ ಸ್ವಾಧೀನಕ್ಕೆ ಮಗಳನ್ನು ಕೊಡುತ್ತೇನೆ ಎಂದು ಹೇಳುವಂತಾದ್ದು ಆಗಿರುತ್ತದೆ.
ಹಾಗಾಗಿ ಮೊದಲು ತಂದೆಯಿಂದ ಪೋಷಣೆ, ನಂತರ ಗಂಡನಿಂದ ಪೋಷಣೆ, ಕೊನೆಯಲ್ಲಿ ವೃದ್ಧಾಪ್ಯದಲ್ಲಿ ಮಕ್ಕಳಿಂದ ಪೋಷಿಸಬೇಕು ಎಂದು ಹೇಳಿದೆ.
ಅದಲ್ಲದೆ ಕನ್ಯೆಯು ದಾನ ಕೊಡುವ ವಸ್ತುವಲ್ಲ, ದಾನ ಕೊಡುವಂತಹದ್ದಲ್ಲವೆಂದು ಹೇಳಿರುತ್ತದೆ. ಪ್ರಶ್ನೆ ಕೇಳಿದ್ದರೆ ತಕ್ಕ ಉತ್ತರ ಅದು ನಮ್ಮ ಸಂಪ್ರದಾಯ.
ಯಾವಾಗಲೂ ಅಗತ್ಯಕ್ಕಿಂತ ಹೆಚ್ಚು ಉತ್ತರ ಕೊಟ್ಟು ಗೊತ್ತಿಲ್ಲ. ಆ ಉತ್ತರವು ಆ ಕಾಲ, ಪರಿಸರಕ್ಕೆ ಸೂಕ್ತವೇ ಎಂದು ನೋಡಿ ಕೊಟ್ಟಿರುತ್ತೇವೆ.
ಅದು ನಮ್ಮ ಅಭ್ಯಾಸ. ಯಾವ ಪ್ರಶ್ನೆಗೂ ಉತ್ತರವಿಲ್ಲವೆಂಬುದಿಲ್ಲ.
ಚಾಲ್ತಿಯಲ್ಲಿ ಕನ್ಯಾ ಆಧಾನ ಹೋಗಿ ಕನ್ಯಾದಾನವು ಆಯ್ತು. ಮೊದಲು ಹೇಳುವಾಗ ಕನ್ಯಾಧಾನವೆಂದೇ ಸ್ಪಷ್ಟವಾಗಿಯೇ ಹೇಳುತ್ತಿದ್ದರು.
ಶಬ್ದವನ್ನು ದೀರ್ಘ ಮಾಡಿರುವ ಕಾರಣ ‘ಆ’ಕಾರವು ಅದರಲ್ಲಿಯೇ ಸೇರಿಹೋಗುತ್ತದೆ, ಹಾಗಾಗಿ ಕನ್ಯಾಧಾನವಾಯ್ತು.
ಕೊನೆಗೆ ‘ಧಾ’ಕಾರವು ಶಬ್ದದ ಮಹಾಪ್ರಾಣ ಅಕ್ಷರ ಉಚ್ಛಾರ ಬಿಟ್ಟು ‘ದಾ’ಕಾರ ಎಂದು ಅಲ್ಪಪ್ರಾಣವಾಗಿ ಕನ್ಯಾದಾನವಾಗಿ ಚಾಲ್ತಿಯಲ್ಲಿ ಬಂದಿತು.
ಅಲ್ಲಿ ಆಧಾನವೆಂದರೆ ವರನ ವಶಕ್ಕೆ ಕನ್ಯೆಯನ್ನು ಒಪ್ಪಿಸುವುದು ಎಂದರ್ಥ. ಅಂದರೆ ನ್ಯಾಸರೂಪವಾಗಿ ಇಡುವುದು ಎಂದೇ ಅರ್ಥ ಬರುವುದು.
ವಿವಾಹ ಸಂಸ್ಕಾರದಲ್ಲಿ ಕನ್ಯೆಯನ್ನು ಧಾರೆಯೆರೆದು ವರನಿಗೆ ಕೊಡುವಾಗ ಕೆಲವು ಮಂತ್ರಗಳನ್ನು ಹೇಳುತ್ತಾರೆ. ಆ ಮಂತ್ರಗಳು ಹೇಳುವುದು ಇದನ್ನೇ. ಅಂದರೆ ನೀನು ಇವಳನ್ನು ಹೇಗೆ ಪೋಷಿಸಬೇಕು? ನಾನು ಹೇಗೆ ಪೋಷಿಸಿದ್ದೇನೆ? ಇವಳಿಗೆ ಯಾವುದರಲ್ಲಿ ಆಸಕ್ತಿಯಿದೆ? ಏನೇನು ರುಚಿಗಳಿವೆ? ಏನೇನು ಅಪೇಕ್ಷೆಗಳಿವೆ? ಎಂದು ಎಲ್ಲವನ್ನೂ ಹೇಳುತ್ತಾನೆ ವಧುವಿನ ತಂದೆ.
ಇಂತಹ ಆಸಕ್ತಿಗೆ ತೊಂದರೆಯಾಗದಂತೆ ಅವಳ ಮನಸ್ಸಿಗೆ ಅನುರೂಪನಾಗ್ ಸ್ವೀಕರಿಸಬೇಕು. ಅಂದರೆ ಈ ಕನ್ಯೆಯನ್ನು ನಿನ್ನಲ್ಲಿ ಇಡುವುದು ಮಾತ್ರ, ಇದು ನನ್ನದಲ್ಲ ಎಂದು ಹೇಳಿರುವುದಿಲ್ಲ! ಆದ್ದರಿಂದ ಇವಳು ನನ್ನ ಮಗಳೇ ಆಗಿದ್ದಾಳೆ.
ನಿನ್ನ ಹೆಂಡತಿಯಾಗಿರುತ್ತಾಳೆ, ನೆನಪಿರಲಿ ಎಂದು ಎಚ್ಚರಿಸುತ್ತಾನೆ.
ಈ ರೀತಿ ಹೇಳುತ್ತಾ ಕೊನೆಯಲ್ಲಿ ನಾಲ್ಕು ಕಾಲು ರೂಪಾಯಿ ದಕ್ಷಿಣೆಯನ್ನು ಕೊಡುತ್ತಾನೆ.
ಅದನ್ನೇ ಈಗ ಜನ ನಾಲ್ಕಾರು ಲಕ್ಷ, ಕೋಟಿ ಎಂದೆಲ್ಲ ಮನಬಂದಂತೆ ಬಳಸುತ್ತಾರೆ.
ಆದರೆ ಒಂದು ಪೈಸೆಯನ್ನೂ ಹೆಚ್ಚು ಕೊಡಬಾರದೆಂದು ಹೇಳಿದ್ದಾರೆ!! ಅಷ್ಟು ಮಾತ್ರ. ಅದಕ್ಕೊಂದು ಮಿತಿಯಿದೆ. ಏಕೆಂದರೆ ಅದು ವರಹ ರೂಪ.
ನಾಲ್ಕು ಕಾಲು ಎಂದರೆ ಒಂದು ವರಹ ಎಂದು ಲೆಕ್ಕ. ಸಮಸ್ತ ಪ್ರಕೃತಿ ಒಟ್ಟು ಸೇರಿದರೆ ವರಾಹ ಸ್ವರೂಪ.
ಈ ಭೂಮಿಯನ್ನು ವರಾಹ ಎಂದು ಹೇಳುವುದು ಅದರಿಂದಾಗಿಯೇ. ಅಂದರೆ ಈ ಭೂಮಿ ಸಮಾನವಾಗಿ ದಕ್ಷಿಣೆಯನ್ನು ನಿನಗೆ ಕೊಟ್ಟಿದ್ದೇನೆ.
ಭೂಮಿಯೆಲ್ಲವನ್ನೂ ದಕ್ಷಿಣಾರೂಪದಲ್ಲಿ ನಿನಗೆ ಕೊಟ್ಟಿದ್ದೇನೆ. ಇನ್ನು ಕೊಡಲಿಕ್ಕೆ ಏನೂ ಉಳಿದಿಲ್ಲ. ಪುರಾಣದಲ್ಲಿ ಉದಾಹರಣೆ ಬರುತ್ತದೆ.
ಪರಶುರಾಮನು ಇಡೀ ಭೂಮಿಯನ್ನು ಗೆದ್ದು ಕಶ್ಯಪನಿಗೆ ಧಾರೆಯೆರೆದು ಕೊಡುತ್ತಾನೆ ಎಂದು. ಅಂದರೆ ವರಾಹವನ್ನು ಕೊಟ್ಟ ಅಷ್ಟೆ.
ವರಾಹ ಸ್ವರೂಪದಲ್ಲಿ ದಕ್ಷಿಣೆಯನ್ನು ಕೊಟ್ಟ. ಏಕೆಂದರೆ ಅದಕ್ಕಿಂತ ಹೆಚ್ಚು ಭೂಮಿಯಲ್ಲಿ ಇಲ್ಲ. ಹೆಚ್ಚು ಕೊಟ್ಟಿದ್ದೆ ಎಂದರೆ ಅದು ಸುಳ್ಳು, ಮೋಸ ಎಂದಾಯ್ತು.
ಈ ಭೂಮಿಗಿಂತ ಹೆಚ್ಚು ಕೊಡಲು ಸಾಧ್ಯವಿಲ್ಲ. ಆ ದಕ್ಷಿಣೆ ಕೊಡುವಾಗ ಇವಳಿಗೆ ಗಂಡು ಮಗುವಾದರೆ ಆತನಿಗೆ ದೌಹಿತ್ರ ಹಕ್ಕು – ಅಂದರೆ ನನ್ನ ಕಡೆಯ ಹಕ್ಕಿನ ಪ್ರಾಪ್ತಿಯಾಗುತ್ತದೆ. ಆ ಪ್ರಾಪ್ತಿಯು ಇಲ್ಲಿ ನಿಸ್ಸಂತತಿಯಾದರೆ ಮಾತ್ರ. ಅದಕ್ಕಾಗಿ ಈಗಲೇ ಕೊಟ್ಟುಬಿಟ್ಟಿದ್ದೇನೆ.
ಅಜ್ಜನ ಮನೆಯ ಆಸ್ತಿ ದೌಹಿತ್ರ ಹಕ್ಕು. ನನ್ನ ಮನೆಯಲ್ಲಿ ನಿಸ್ಸಂತತಿಯಾದರೆ ಮಾತ್ರ ನಿನಗೆ ಆಸ್ತಿಯ ಹಕ್ಕು ಬರುತ್ತದೆ. ಇಲ್ಲದಿದ್ದರೆ ಈಗಲೇ ಕೊಟ್ಟಿದ್ದರಲ್ಲಿ ತೀರ್ಮಾನ.
ಮುಂದೆ ಆಸ್ತಿಯನ್ನು ಕೇಳುವ ಹಕ್ಕಿರುವುದಿಲ್ಲ.
ಹಾಗಾಗಿ ಎರಡೂ ಚಿಂತನೆಯನ್ನು ಮಾಡುತ್ತಾ ದೌಹಿತ್ರ ಹಕ್ಕನ್ನು ನ್ಯಾಸರೂಪವಾಗಿ ಮೊದಲೇ ವರನ ಕೈಯಲ್ಲಿ ದಕ್ಷಿಣಾರೂಪದಲ್ಲಿ ಕೊಡುವಂತಾದ್ದು ವರಹ ದಕ್ಷಿಣೆಎಂದು.
ಅದು ಅಪಭ್ರಂಶವಾಗಿ ಈಗ ವರದಕ್ಷಿಣೆ ಆಗಿಬಿಟ್ಟಿದೆ. ಅದು ಮುಂದೆ ಚಿಂತಿಸುವ ವಿಚಾರವಾದ್ದರಿಂದ ತತ್ಕಾಲದ ಅಂದರೆ ಕನ್ಯೆಯನ್ನು ಆಧಾನ ಮಾಡುವ ಸಮಯದ ಸಮಸ್ಯೆಯಲ್ಲ, ಮುಂದೆ ಚಿಂತನೆಗೆ ಬರತಕ್ಕ ಸಮಸ್ಯೆ. ಹಾಗಾಗಿ ಅದು ಕ್ಷೀಣವಿಚಾರ. ಆದರೆ ಸತ್ಯ.
ಏಣ ವಿಚಾರವೂ ಹೌದು, ಸುಳ್ಳು ವಿಚಾರವಲ್ಲ. ಮುಂದೊಂದು ದಿನ ನಿಸ್ಸಂತತಿಯಾಗಿ ಅಜ್ಜ ಅಜ್ಜಿಗೆ ಈ ಮೊಮ್ಮಗನೇ ದಾತಾರನಾಗಬಹುದು ಅನಿವಾರ್ಯ.
ಹಾಗಾಗಿ ಈಗಲೇ ಕೊಡಲ್ಪಡತಕ್ಕದ್ದು ದದಾತಿ. ಹಾಗಾಗಿ “ಕ್ಷೀಣ ಏಣ ವಿಚಾರೈಃ ದದಾತಿ ಇತಿ ದಕ್ಷಿಣಾಃ” ಎಂದು ಬ್ರಾಹ್ಮಿಯಲ್ಲಿ ಪ್ರಸಕ್ತ ವಿಚಾರದ ದಕ್ಷಿಣಾ ಎಂಬ ಶಬ್ದೋತ್ಪತ್ತಿ. ಅದು ಕ್ಷೀಣ ವಿಚಾರವೂ ಹೌದು, ಏಣ ವಿಚಾರವೂ ಹೌದು, ಅದನ್ನು ನಿನಗೆ ದತ್ತವಾಗಿ ಕೊಡುತ್ತಾ ಇದ್ದೇನೆ; ಇದು ದಕ್ಷಿಣಾ ಎನ್ನಿಸಿಕೊಳ್ಳುತ್ತದೆ.
ಯಾವುದೆಂದರೆ ಅದು ವರಹ. ಅಂದರೆ ಸಮಸ್ತ ಪ್ರಕೃತಿ ಎಂದರ್ಥ.
ಯಾವೊಬ್ಬ ಮನುಷ್ಯನು ತ್ಯಾಗ ಮಾಡುವುದಿದ್ದರೆ ಎಷ್ಟನ್ನು ಮಾಡಬಹುದು? ಯಾವುದು ಯಾವುದೋ ಕಾರಣಕ್ಕೆ ಏನೇನೋ ತ್ಯಾಗ ಮಾಡಬಹುದು.
ಆದರೆಆತ್ಮಾರ್ಥೇ ಪೃಥಿವೀಂ ತ್ಯಜೇತ್ ಎಂದು ಹೇಳುತ್ತಾರೆ. ಆತ್ಮೋನ್ನತಿಗಾಗಿ ಸಾಧನೆ ಮಾಡುವುದಿದ್ದರೆ ಈ ಪೃಥ್ವಿಯನ್ನು ತ್ಯಾಗ ಮಾಡಲಿಕ್ಕೆ ಸಿದ್ಧ ಎಂದು ಅಲ್ಲಿಯವರೆಗೂ ಈ ಭೂಮಿಯನ್ನು ಬಿಡುವುದಕ್ಕೆ ಆಗುವುದಿಲ್ಲ.
ಆತ್ಮೋನ್ನತಿ ಸಾಧನೆಗಾಗಿ ಪೃಥ್ವಿಯನ್ನೇ ತ್ಯಾಗ ಮಾಡಬಹುದು. ಅದಕ್ಕಾಗಿ ಈ ಪೃಥ್ವೀ ಸ್ವರೂಪದ ವರಹವನ್ನು ನನ್ನ ಆತ್ಮೋನ್ನತಿಗಾಗಿ ಸಾಧನೆಯಾಗುವ ಕಾಲದಲ್ಲಿ ನಿನ್ನಲ್ಲಿ ನ್ಯಾಸರೂಪವಾಗಿ ಕೊಡುತ್ತಿದ್ದೇನೆ.
ವರಹ ದಕ್ಷಿಣೆಯು ವರದಕ್ಷಿಣೆಯಾಗಿ ಏನೇನೋ ಅನಾಹುತಕ್ಕೆ ಕಾರಣವಾಗುತ್ತಿದೆ ಈಗ. ಆಧಾನವಾಗಿ ಇಡುವಂತಾದ್ದು, ನ್ಯಾಸರೂಪವಾಗಿಯೇ ಇಡುವಂತಾದ್ದು.
ಏಕೆಂದರೆ ಮುಂದೆ ಆತ್ಮೋನ್ನತಿಗಾಗಿ ಈಗ ನಾನು ಪ್ರಾಪಂಚಿಕ, ಮುಂದೆ ಸಾಧನೆಯ ಮುಂದೆ ಅಕಸ್ಮಾತ್ ಆತ್ಮೋನ್ನತಿ ಸಾಧನೆಯಾಗುವುದಾದರೆ ಪೂರಕವಾಗಿ ಈ ನನ್ನ ಮಗಳಲ್ಲಿ ಹುಟ್ಟತಕ್ಕಂತಹ ಮಗನಿಂದ ಸಹಾಯವಾಗುವುದಿದ್ದರೆ ಇದು ದಕ್ಷಿಣಾ ಆಗುತ್ತದೆ ಎಂದು ಹೇಳುತ್ತದೆ.
ಹಾಗಾಗಿ ಆ ನಾಲ್ಕು ಕಾಲು ರೂಪಾಯಿಗೆ ಅಷ್ಟು ಜವಾಬ್ದಾರಿಯಿದೆ. ಅಷ್ಟು ವಿಶಾಲ ಅರ್ಥದ ಕೆಲಸವಿದೆ. ಆ ವಿಶಾಲಾರ್ಥಕ ವಿಚಾರವನ್ನು ಸೂಕ್ಷ್ಮವಾಗಿ ಅಲ್ಲಿ ಹೇಳಿ ಕೊಡುವಂತಹ ವಿಧಿಯು “ದತ್ತಂ ನ ಮಮ” ಎಂದು ಮಾತ್ರ ಹೇಳುತ್ತದೆ.
ಈ ದುಡ್ಡನ್ನು ನಾನು ಪುನಃ ಹಿಂದಕ್ಕೆ ಕೇಳುವುದಿಲ್ಲ. ಆದರೆ ಕನ್ಯೆ ನಿನ್ನದ್ದಲ್ಲ. ಅಲ್ಲಿ ಕೊಡತಕ್ಕಂತಹ ದಕ್ಷಿಣೆ ನನ್ನದ್ದಲ್ಲ ಎಂದು ಹೇಳಿದ್ದು ಬಿಟ್ಟರೆ ಕನ್ಯೆ ನನ್ನದ್ದಲ್ಲ ಎಂದು ಹೇಳಲಿಲ್ಲ.
ಬೇರೆ ಯಾವುದೇ ದಾನ ಕೊಟ್ಟರೂ “ನ ಮಮ ನ ಮಮ” ಎಂದು ೨ ಸಾರಿ ಹೇಳಬೇಕು. ಅಲ್ಲಿ ಕೊಡುವ ವಸ್ತುವು ಮತ್ತು ದಕ್ಷಿಣೆ ಈ ಎರಡೂ ನನ್ನದಲ್ಲ ಎಂದು ಹೇಳುವುದಕ್ಕಾಗಿ ಆ ರೀತಿ ೨ ಸಾರಿ ಹೇಳುವುದು.
ಆದರೆ ಇಲ್ಲಿ ಕನ್ಯಾಧಾನ ಮಾಡುವ ಪ್ರಕ್ರಿಯೆಯಲ್ಲಿ ಮಾತ್ರ ದತ್ತಂ ನ ಮಮ ಎಂದು ಒಂದು ಸಾರಿ ಮಾತ್ರ ಹೇಳುವುದು. ಅಂದರೆ ಈ ದಕ್ಷಿಣೆ ಮಾತ್ರ ನಿನ್ನದ್ದು, ನನ್ನದ್ದಲ್ಲ ಎಂದು.
ಆದರೆ ಕನ್ಯೆ ಮಾತ್ರ ನನ್ನದ್ದು, ನಿನ್ನದ್ದಲ್ಲ ಎಂದು ಅದರ ಅರ್ಥವಾಗಿರುತ್ತದೆ. ಅವಳ ಪೋಷಣೆಯ ಜವಾಬ್ದಾರಿ ನಿನ್ನದು. ನಿನಗೆ ಹೆಂಡತಿಯಾಗಿರುತ್ತಾಳೆ ಅಷ್ಟೆ. ಹಾಗಾಗಿ ಅಲ್ಲಿ ಆಧಾನವೇ ಬಿಟ್ಟರೆ ಕನ್ಯಾದಾನವಲ್ಲ.
ದಾನ ಇಲ್ಲ, ಕೊಡಲ್ಪಡುವುದೂ ಇಲ್ಲ, ನ್ಯಾಸರೂಪದಲ್ಲಿ ಇಡಲ್ಪಡುವುದು ಎಂದೆನಿಸಿಕೊಳ್ಳುತ್ತದೆ. ಹಾಗಾಗಿ ಮುಂದೆ ಹುಟ್ಟತಕ್ಕಂತಹ ಮಗುವಿಗೆ ದೌಹಿತ್ರ ಹಕ್ಕಿನ ಅಂಶ ಎಷ್ಟು ರೀತಿಯಲ್ಲಿ ಪ್ರಾಪ್ತವಾಗುತ್ತದೆ? ಎಂದರೆ
· ತಂದೆ,
· ತಂದೆಯ ತಂದೆ,
· ಅಜ್ಜ ಮುತ್ತಜ್ಜ ಇವರ ವಂಶವಾಹಿ ವ್ಯವಸ್ಥೆಗಳು, ಹಾಗೆ ದ್ವಾದಶ ಪಿತೃಗಣ ವಿಭಾಗಿಸಲ್ಪಟ್ಟಂತಹ
· ತಾಯಿ,
· ತಾಯಿಯ ತಾಯಿ,
· ತಾಯಿಯ ತಂದೆ,
· ತಂದೆಯ ತಾಯಿ,
ಹೀಗೆ ಈ ವಿಭಾಗದಲ್ಲಿ. ಇಷ್ಟು ಭಾಗದಲ್ಲೂ ಮಗುವಿಗೆ ಪ್ರಾಪ್ತವಾಗುತ್ತದೆ ದೌಹಿತ್ರ ಹಕ್ಕು. ಇಲ್ಲಿ ಹಕ್ಕು ಎಂದರೇನು? ಹಕ್ಕು ಎಂದರೆ ಆಸ್ತಿಯ ಹಕ್ಕಲ್ಲ. ನಿಜವಾಗಿ ಹಕ್ಕೆಂದರೆ –
ಅಧ್ವರ್ಯವೋ ದುಗ್ಧಮಂಶುಂ ಜುಹೋತನ ವೃಷಭಾಯ ಕ್ಷಿತೀನಾಮ್ |
ಗೌರಾದ್ ವೇದೀಯಾಙ್ ಅವಪಾನಮಿಂದ್ರೋ ವಿಶ್ವಾಹೇದ್ ಯಾತಿ ಸುತಸೋಮಮಿಚ್ಛನ್ ||
ಈ ದೌಹಿತ್ರ ಹಕ್ಕು ಇಷ್ಟು ವ್ಯಾಪ್ತಿಯನ್ನು ಹೊಂದುತ್ತದೆ. ಅಂದರೆ ಹಿಂದೆ ಒಬ್ಬ ಸಹಜವಾಗಿ ಮನುಷ್ಯನಾಗಿ ಹುಟ್ಟಿದವನು ತನ್ನ ಬಾಲ್ಯಾದಿ ವಿಧ್ಯಾಭ್ಯಾಸ, ಪ್ರೌಢಾವಸ್ಥೆಯಲ್ಲಿ ಸಾಂಸಾರಿಕ ಜೀವನ, ನಂತರ ಗೃಹಸ್ಥಾಶ್ರಮ ಧರ್ಮದಂತೆ ಆಚಾರ ವಿಚಾರಗಳು, ಜೊತೆಯಲ್ಲಿ ಯಜ್ಞ-ಯಾಗಾದಿಗಳು ಇವುಗಳನ್ನು ಮಾಡುತ್ತಾ ಇದ್ದಂತಹ ಕಾಲವದು.
ಹಾಗೆ ಅಕಸ್ಮಾತ್ ಆ ಹುಟ್ಟುವ ಮಗು ಮುಂದೆ ಅಧ್ವರ್ಯು ಆದಂತಹ ಯಾವುದಾದರೂ ಯಾಗ-ಯಜ್ಞ ನಡೆಸಿದರೆ ಇಷ್ಟೂ ಜನರಿಗೆ ಅಲ್ಲಿ ಅವಕಾಶ ಕೊಡು. ಈ ೧೨ ವರ್ಗದ ಎಷ್ಟು ಪಿತೃಗಣವಾಗುತ್ತಾರೆ, ಅಷ್ಟೂ ಜನಕ್ಕೂ ಯಾಗದಲ್ಲಿ ಅವಕಾಶವನ್ನು ಕೊಡು. ಆಗ ನಾವು ಆತ್ಮೋನ್ನತಿಯನ್ನು ಸಾಧಿಸಿಕೊಳ್ಳುತ್ತೇವೆ.
ಜಜ್ಞಾನಃ ಸೋಮಂ ಸಹಸೇ ಪಪಾಥ ಪ್ರತೇ ಮಾತಾ ಮಹಿಮಾನಮುವಾಚ |
ಏಂದ್ರ ಪಪ್ರಾಥೋರ್ವ೧ಂತರಿಕ್ಷಂ ಯುಧಾ ದೇವೇಭ್ಯೋ ವರಿವಶ್ಚಕರ್ಥ ||
ಹಾಗೆ ತಾಯಿಗೆ ಇರತಕ್ಕಂತಹ ಸ್ಥಾನ, ಪ್ರಪಂಚದಲ್ಲಿ ಅತೀ ಮಹತ್ತರವಾದದ್ದು. ಹಾಗಾಗಿ ಮಗುವಿಗೆ ತಾಯಿ ಎಂದು ಹೇಳುವಂತಹ ಮಹಾನ್ ಶಕ್ತಿಯನ್ನು ಕೊಟ್ಟದ್ದು ಈ ಅಜ್ಜ. ಹಾಗಾಗಿ ಆ ಒಂದು ನೆನಪನ್ನು ನೀನು ಮರೆಯಬಾರದು.
ಹಾಗಾಗಿ ಮುಂದೆ ನನ್ನ ವಂಶವನ್ನೂ ಉನ್ನತಿ ಮಾಡುವಂತಹ ಲಭ್ಯತೆ ಬಂದಾಗ ನಿನ್ನ ಮಾತೃವರ್ಗ ಎಂದು ಹೇಳತಕ್ಕಂತಹ ಅಂಶವನ್ನು ಯಾವುದೇ ಕಾರಣಕ್ಕೂ ಮರೆಯದಿರು. ಅದಕ್ಕಾಗಿ ನಿನಗೆ ಈ ರೀತಿಯ ಭೂಮಿ ಸ್ವರೂಪದ, ಇದಕ್ಕಿಂತ ಹೆಚ್ಚಿನದ್ದು ಇಲ್ಲದ; ಅಂದರೆ ತಾಯಿಯನ್ನೂ ಭೂಮಿ ಎಂದು ಹೇಳುತ್ತದೆ. ಭೂಮಿಗಿಂತ ದೊಡ್ಡದುಯಾವುದು ಎಂದಾಗ ತಾಯಿ ಎಂದನಂತೆಧರ್ಮರಾಯ. ಹಾಗೆ ಭೂಮಿಯೂ ತಾಯಿಯೂ ಸಮಾನವಾದ್ದರಿಂದ ಆ ತಾಯಿಯ ರೂಪದಲ್ಲಿ ನಿನಗೆ ಕೊಟ್ಟಿದ್ದೇನೆ.
ನೀನು ಮಾಡತಕ್ಕಂತಹ ಸತ್ಕಾರ್ಯಗಳಲ್ಲಿ, ಸತ್ಫಲಗಳನ್ನು ಉಂಟುಮಾಡುವ ಎಲ್ಲವೂ ನನ್ನ ವಂಶದ ಅಂದರೆ ಈ ಮಗುವಿನ ತಾಯಿ ವಂಶದ ಎಲ್ಲರಿಗೂ ಪ್ರಾಪ್ತವಾಗುವಂತೆ ನಿನ್ನ ಪ್ರಕ್ರಿಯೆ ಇರಲಿ ಎಂದು ಹೇಳುತ್ತಾ ಬೇಡಿಕೆ ಹೇಳಿಕೆಯವರೆಗೆ ಈ ಆದರ್ಶವಿರುತ್ತದೆ.
ಹಾಗಾಗಿ ಅದು ಆಧಾನವಾಗುತ್ತದೆಯೇ ವಿನಃ ದಾನ ಆಗುವುದಿಲ್ಲ.
ಎರಡು ವರ್ಷಗಳ ಹಿಂದೆ ಮೇಮೋರಿ ಪೋಸ್ಟ್ ಮತ್ತೆ ನಿಮ್ಮ ಮುಂದೆ ತಂದಿದ್ದಿನಿ
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
Recent Comments