ಮದುವೆಯಾಗುವವರ ದೃಷ್ಟಿಕೋನದಲ್ಲಿ

 

ಮದುವೆಯಾಗಲು ಅನೇಕರು ಉತ್ಸುಕರಾಗಿರುತ್ತಾರೆ. ಆದರೆ ಮದುವೆಯಾದ ನಂತರ ಬರುವ ಹೊಣೆಗಾರಿಕೆ ಕುರಿತು ಅವರು ಯೋಚಿಸಿರುವುದೇ ಇಲ್ಲ. ಹೇಗೋ ಆಗತ್ತೆ ಎಂದು ಹೇಳಿಕೊಂಡು ಅವನ್ನು ತಳ್ಳಿ ಹಾಕಿ ಬಿಟ್ಟಿರುತ್ತಾರೆ. ಮದುವೆಯಾದ ಕೆಲವು ದಿನಗಳ ನಂತರ ಹೀಗೆ ತಳ್ಳಿಹಾಕಿದವೇ ಬೃಹದಾಕಾರವಾಗಿ ಎದುರು ನಿಲ್ಲುತ್ತವೆ. ಆದುದರಿಂದ ಕಲ್ಪನಾಲೋಕದಲ್ಲಿಯೇ ವಿಹರಿಸದೆ, ವಾಸ್ತವಿಕತೆಯನ್ನು ಕುರಿತೂ ಯೋಚಿಸುವುದು ಉತ್ತಮ.

ಇತ್ತೀಚೆಗೆ ಕೆಲವು ಜೋಡಿಗಳಲ್ಲಿ ಹೊಸದೊಂದು ನಡವಳಿಕೆ ಕಂಡು ಬಂದಿದೆ. ಕಾರಣಾಂತರಗಳಿಂದ ವಿಚ್ಚೇದನ ಪಡೆಯಬೇಕಾದರೆ, ಯಾರ ಯಾರ ಹಕ್ಕುಗಳೇನು, ಯಾರಿಗೆ ಮಕ್ಕಳೂ ಸೇರಿದಂತೆ ಏನೆಲ್ಲ ಸೇರುವುದು ಎನ್ನುವ ಒಡಂಬಡಿಕೆಯನ್ನು ಮದುವೆಗೆ ಮುಂಚೆಯೇ ನಿರ್ಧರಿಸಿಕೊಂಡು ಕರಾರು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ವಿಚ್ಛೇದನ ಸೃಷ್ಟಿಸುವ ಕಹಿ ಕಡಿಮೆಯಾಗುತ್ತದೆ.

ಮದುವೆಯಾಗುವವರು ಈ  ಕೆಲವು ಅಂಶಗಳನ್ನು ನೆನಪಿಡುವುದು ಕ್ಷೇಮಕರ.

ಮದುವೆಯಾದ ನಂತರ ಹುಡುಗ-ಹುಡುಗಿಯ ಇಬ್ಬರ ನಡವಳಿಕೆಯಲ್ಲಿಯೂ ಬದಲಾವಣೆ ಸಾಮಾನ್ಯ, ಸಹಜ. ಮದುವೆಗೆ ಮುಂಚಿನ ನಡವಳಿಕೆಯನ್ನೇ ನಿರೀಕ್ಷಿಸುವುದು ವಿರಸಕ್ಕೆ ಕಾರಣವಾಗುತ್ತದೆ.

ದಂಪತಿಗಳಿಬ್ಬರಿಗೂ ಕೆಲವು ಹೊಸ ಹೊಣೆಗಾರಿಕೆಗಳು ಸೇರಿಕೊಳ್ಳುತ್ತವೆ. ಅವೂ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುತ್ತವೆ. ಆ ಸಂಬಂಧ ಕೆಲವು ಹೊಂದಾಣಿಕೆಗಳನ್ನು ಕುರಿತು ಚರ್ಚಿಸಿ, ಅವನ್ನು ನಿಬಾಯಿಸುವ ವಿಷಯದಲ್ಲಿ ಒಪ್ಪಂದ ಮಾಡಿಕೊಂಡಿರುವುದು ಒಳ್ಳೆಯದು.

 

ಮನೆಗೆ ಬಂದ ಸೊಸೆಯಿಂದ ಮನೆಯವರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಅವಳು ದುಡಿಯುವ ಸೊಸೆಯಾದರಂತೂ ಅವಳ ಸಂಪಾದನೆ ಮತ್ತು ಅವಳಿಂದ ನಿರೀಕ್ಷಿಸುವ ಮನೆ ಕೆಲಸಗಳ ನಡುವೆ ತಾಳೆಯಾಗದೆ ವಿರಸಗಳಾಗುತ್ತವೆ. ದುಡಿಯುವ ಸೊಸೆ ಬೇಕು, ಸೀತೆಯಂತೆ ಅನುಸರಿಸಿಕೊಂಡು ಹೋಗಬೇಕು ಎನ್ನುವ ಧೋರಣೆಯೇ ಬದಲಾಗಬೇಕು. ಸೊಸೆಯನ್ನು ಮತ್ತು ಮಗಳನ್ನು ನೋಡಿಕೊಳ್ಳುವ ರೀತಿಯಲ್ಲಿ ತಾರತಮ್ಯವಿರಬಾರದು. ಸೊಸೆ ಸಹ ತನ್ನ ತಂದೆ-ತಾಯಿಯರನ್ನು ನೋಡಿಕೊಂಡಂತೆಯೇ ಅತ್ತೆ ಮಾವಂದಿರನ್ನೂ ನೋಡಿಕೊಳ್ಳಲು ತಯಾರಿರಬೇಕು.

ಗಂಡನಾದವನು ಮನೆ ಕೆಲಸ ತನ್ನದಲ್ಲ ಎಂದು ಕೂರುವಂತಿಲ್ಲ. ಇಬ್ಬರೂ ದುಡಿಯುವವರಾದರೆ ಅವನೂ ಕೆಲವು ಕೆಲಸಗಳ ಹೊರೆಯನ್ನು ತೆಗೆದುಕೊಳ್ಳ ಬೇಕು. ತಾಯಿ ತನ್ನ ಭವಿಷ್ಯವನ್ನೇ ಕನಸಾಗಿ ರೂಢಿಸಿಕೊಂಡು ಸಾಕಿದವಳು, ಹೆಂಡತಿ ತನ್ನ ಭವಿಷ್ಯಕ್ಕಾಗಿ ತನ್ನನ್ನೇ ನಂಬಿಕೊಂಡು ಬಂದವಳು. ಇವರಿಬ್ಬರ ನಿರೀಕ್ಷೆಗಳ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ತನ್ನ ಹೊಣೆಗಾರಿಕೆ ಎನ್ನುವುದನ್ನು ಅರಿತುಕೊಂಡು ಅದಕ್ಕೆ ಬೇಕಾದ ಮಾನಸಿಕ ಶಕ್ತಿ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು.

ಮುಂದೆ ಮಾಡುವುದು ಇದ್ದೇ ಇರುತ್ತದೆ ಎಂದು ಹಲವು ಪೋಷಕರು ಹೆಣ್ಣು ಮಕ್ಕಳಿಗೆ ಏನೂ ಕೆಲಸ ಕೊಡದೆ, ಜವಾಬ್ದಾರಿ ಕಲಿಸದೆ ಬೆಳೆಸಿರಬಹುದು. ಇದೇ ಪರಿಸ್ಥಿತಿ ಮದುವೆಯಾದ ನಂತರವೂ ಇರುವುದಿಲ್ಲ ಎಂದು ಅರ್ಥ ಮಾಡಿಕೊಂಡು ಹೆಣ್ಣು ಮಕ್ಕಳು ಜವಾಬ್ದಾರಿಯನ್ನು ಕಲಿಯುವತ್ತ ಗಮನ ಕೊಡಬೇಕು.
ದಾಂಪತ್ಯ ಇಬ್ಬರೂ ಜೊತೆ ಸೇರಿ ನಡೆಸುವ ಬಾಳ್ವೆ.

ಹುಡುಗ ಹಾಗು ಉದ್ಯೋಗಸ್ಥ ಹುಡುಗಿ ಮದುವೆಯ ನಂತರ ತಮ್ಮ ಹಣವನ್ನು “ನಮ್ಮ” ಹಣವನ್ನಾಗಿಸಿಕೋಳ್ಳುವುದು ಸೊಕ್ತ, ಖರ್ಚು-ವೆಚ್ಚದಲ್ಲಿ ಹೋಂದಾಣಿಕೆ ಅಗತ್ಯ. ಹೆಣ್ಣು, ತಂದೆ-ತಾಯಿಯರಿಗೆ ಒಬ್ಬಳೆ ಮಗಳಾದರೆ, ತಂದೆ ತಾಯಿಯರ ಜವಾಬ್ದಾರಿ ಅವರ ಮೇಲಿರುತ್ತದೆ, ಅದನ್ನು ಹುಡುಗ ಹಾಗು ಅತ್ತೆ-ಮಾವಂದಿರು ಕೂಡ ಅರಿಯಬೇಕು.

ಒಂದೇ ಮಗುವಾಗಿದ್ದರೆ, ಅಂತಹ ಮಕ್ಕಳಿಗೆ ಇತರರೊಡನೆ ಹೊಂದಾಣಿಕೆಯ ಸಮಸ್ಯೆ ಬರಬಹುದು. ಪೋಷಕರಿಗೂ ಮದುವೆಯಾದ ಮಕ್ಕಳು ಮುಂಚಿನಂತೆ ತಮ್ಮೊಂದಿಗೆ ಇಲ್ಲ, ಅಥವ, ಅವರು ತಮ್ಮೊಂದಿಗೆ ನಡೆದುಕೊಳ್ಳುವ ರೀತಿಯಲ್ಲಿ ಬದಲಾಗಿದೆ ಎನ್ನುವ ಆತಂಕ ಮೂಡಿ ನೆಮ್ಮದಿಯನ್ನು ಹಾಳು ಮಾಡಬಹುದು. ಇಂತಹ ಸನ್ನಿವೇಶಗಳನ್ನು ಜಾಣತನದಿಂದ ನಿಭಾಯಿಸದಿದ್ದರೆ, ವೃದ್ದ ಹಾಗೂ ಯುವ ದಂಪತಿಗಳಿಬ್ಬರಿಗೂ ಸಮಸ್ಯೆಯಾಗಿ ಬಿಡುವುದು.

ಒಂದು ಹಂತದಲ್ಲಿ ಮಕ್ಕಳಿಗೆ ಸ್ವತಂತ್ರ ಜೀವನ ಮಾಡುವುದನ್ನು ಕಲಿಸಿ, ಅದರಂತೆ ನಡೆದುಕೊಳ್ಳಲು ಅವಕಾಶ ಮಾಡಿಕೊಡಬೇಕು.

 

0Shares

You may also like...

Leave a Reply

Your email address will not be published. Required fields are marked *