ಮಕ್ಕಳಿಗೆ ಸೂಕ್ತ ಮದುವೆಯ ವಯಸ್ಸು ಏನು?? ಪೋಷಕರಿಗೆ ಕಿವಿಮಾತು
by Srinagesh r · April 30, 2018
ಮಕ್ಕಳು ಮದುವೆ ವಯಸ್ಸಿಗೆ ಬಂದರು ಎಂದರೆ ಅದೇನೋ ಸಂಭ್ರಮ. ಅವರಿಗೆ ಮದುವೆ ಮಾಡಿಬಿಟ್ಟರೆ, ಜೀವನದಲ್ಲಿ ಸಂತಸ, ನೆಮ್ಮದಿಗಳ ಹೊಳೆ ಹರಿಯುವುದು ಎನ್ನುವ ಆಸೆ.
ಮದುವೆ ವಯಸ್ಸು ಎನ್ನುವ ವಿಷಯದಲ್ಲಿ ಅನೇಕ ಪೋಷಕರಲ್ಲಿ ಗೊಂದಲಗಳಿವೆ. ಹೆಣ್ಣು ಮಕ್ಕಳ ವಿಷಯದಲ್ಲಿಯಂತೂ ಹಲವು ಪೋಷಕರು ಹಳೆಯ ಗುಂಗಿನಲ್ಲೇ ಇದ್ದಾರೆ.
ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡಿಯೋ, ಅಥವಾ ಒತ್ತಾಯ ಮಾಡಿಯೋ ಮದುವೆ ಮಾಡಿಬಿಟ್ಟರೆ ಸಮಸ್ಯೆ ಪರಿಹಾರವಾದೀತು ಎಂದುಕೊಳ್ಳುವ ಪೋಷಕರಿಗೆ ಈಗ ವರದಿಯಾಗುತ್ತಿರುವ ಪ್ರಸಂಗಗಳ ಹಿನ್ನಲ್ಲೆಯಲ್ಲಿ ಒಂದು ಎಚ್ಚರಿಕೆಯ ನುಡಿಯನ್ನು ಹೇಳಲೇಬೇಕಾಗಿದೆ.
- ಆತ್ಮಹತ್ಯೆ, ಕೊಲೆ, ವಿಚ್ಛೇದನ ಹಾಗೂ ಸಂಗಾತಿಯ ಪರಿತ್ಯಾಗಗಳ ಕಥೆಗಳು ದಿನನಿತ್ಯ ವರದಿಯಾಗುತ್ತಿವೆ.
- ಮಗಳು ಯಾರನ್ನೋ ಪ್ರೀತಿಸುತ್ತಿದ್ದಾಳೆ ಎಂದು ತಿಳಿದ ಕೂಡಲೇ ಅವಳನ್ನು ಹೊರ ಹೋಗದಂತೆ ತಡೆದು ತುರ್ತಾಗಿ ಯಾರ ಜೊತೆಯಲ್ಲಿಯೋ ಅವಳ ಮದುವೆ ಮಾಡಿದ ಪ್ರಸಂಗಗಳಲ್ಲಿ ಹುಡುಗಿ ಮದುವೆ ಮನೆಯಿಂದಲೋ, ಗಂಡನ ಮನೆಯಿಂದಲೋ ಓಡಿ ಹೋದ ಪ್ರಸಂಗಗಳಿಗೆ ಲೆಕ್ಕವಿಲ್ಲ
- ಪ್ರಕರಣಗಳಲ್ಲಿ ಪ್ರೇಮಿಯ ಜೊತೆ ಸೇರಿ ಕೊಲೆ ಮಾಡಿರುವ ಘಟನೆಗಳೂ ನಡೆದಿವೆ.
- ಮದುವೆ ಮನೆಯಿಂದ ಓಡಿಹೋಗುವವರಲ್ಲಿ ಹುಡುಗಿಯರು ಮಾತ್ರವಲ್ಲ, ಹುಡುಗರೂ ಇದ್ದಾರೆ ಎನ್ನುವುದನ್ನು ಪೋಷಕರು ಗಮನಿಸಬೇಕು
- ಹೊಣೆಗೇಡಿತನದ ಹುಡುಗರಿಗೆ ಮದುವೆ ಮಾಡಿಬಿಟ್ಟರೆ ಜವಾಬ್ದಾರಿ ಬರುತ್ತದೆ ಎನ್ನುವ ನಂಬಿಕೆ ಹಳತಾಯಿತು. ಆ ನಂಬಿಕೆಯ ಆಧಾರದ ಮೇಲೆ ಮದುವೆ ಮಾಡಹೋಗಿ ಒಂದು ಹುಡುಗಿಯ ಜೀವನವನ್ನು ಹಾಳು ಮಾಡದಿರಿ.
ಇಂದಿನ ಪರಿಸ್ಥಿತಿಯನ್ನು ಪರಿಗಣಿಸಿದಾಗ ವಿದ್ಯೆ ಹಾಗೂ ಉದ್ಯೋಗ ಮದುವೆಗಿಂತ ಪ್ರಮುಖವಾಗುತ್ತಿದೆ. ಹೆಚ್ಚಿನ ವಧು-ವರರು ಸ್ವಾವಲಂಬಿಗಳಾಗಿ ಬದುಕಲು ಇಚ್ಛಿಸುವರು. ವಧು ಹಾಗೂ ವರರ ವಯಸ್ಸು ಒಂದು ಹಂತ ಮೀರಿದರೆ, ಅವರ ಮದುವೆಯ ಆಸೆಗಿಂತ ವೃತ್ತಿ ಹಾಗೂ ಹಣದ ಆತಂಕ ಹೆಚ್ಚಾಗುತ್ತದೆ. ಇಂದಿನ ಕೆಲಸದ ಒತ್ತಡದಲ್ಲಿ, ತಮ್ಮ ಸ್ವಂತ ಕಾರ್ಯಗಳಿಗೆ ಸಮಯವಿಲ್ಲದಿರುವಾಗ ಮಕ್ಕಳಲ್ಲಿ ಮದುವೆಯ ಆಧ್ಯತೆ ಹಾಗೂ ಪರಿಗಣನೆಯು ದೂರವಾಗುತ್ತದೆ.
ಹಲವಾರು ಕಾರಣಗಳನ್ನು ಒಡ್ದಿ ವಧು-ವರರು ತಮ್ಮ ಮದುವೆಯನ್ನು ಮುಂದೂಡಲು ಸನ್ನದ್ದರಾಗಿರುತ್ತಾರೆ.
- “ನನಗೆ ಒಂದು ವರ್ಷ ಟೈಂ ಕೊಡಿ, ನಂತರ ವಿಚಾರ ಮಾಡೋಣ”.
- “ನನಗೆ ಪ್ರಮೋಷನ್ ಆಗುವವರಿಗೂ ನಾನು ಮದುವೆ ಆಗೋಲ್ಲಾ”
- “ನನಗೆ ಯಾರ ಮೇಲು ಡಿಪೆಂಡ್ ಅಗುವುದು ಇಷ್ಟವಿಲ್ಲಾ, ನನಗೆ ಒಳ್ಳೆಯ ಕೆಲಸ ಸಿಗುವವರೆಗೆ ಕಾಯಿರಿ”
- “ಈಗತಾನೆ ಕೆಲಸಕ್ಕೆ ಸೇರಿದ್ದೇನಿ, ಸ್ವಲ್ಪ ದಿನ ಎಂಜಾಯ್ ಮಾಡಲು ಬಿಡಿ”
- “ನಾನು ನಿಮಗೆ ಭಾರವಾಗಿದ್ದೇನಾ, ನನ್ನನ್ನು ಮನೆಯಿಂದ ನೂಕಲು ಪ್ರಯತ್ನಿಸುತ್ತಿದ್ದೀರಾ?”
- “ಪ್ರಾಜೆಕ್ಟ್ ಮುಗಿದಿಲ್ಲವೆಂದು ತಲೆಬಿಸಿಯಾಗಿದೆ,
ಮದುವೆಯಂತೆ”
ಈ ಉತ್ತರಗಳು ತಂದೆ- ತಾಯಿಯರಿಗೆ ಸಹಜವಾಗಿ ಸಿಗುವುದು. ಇಂತಹಾ ಉತ್ತರಗಳಿಂದ ಪೋಷಕರು ಸಡಿಲವಾಗಿಬಿಡುತ್ತಾರೆ. ಸರಿಯಾದ ಸಮಯದಲ್ಲಿ ಮಕ್ಕಳ ಮದುವೆಯಾಗದಿರಲು ಅವರ ಪೋಷಕರೇ ಕಾರಣವೆಂದು ಸಮಾಜ ದೂಷಿಸುತ್ತಿದೆ. ಅದು ಸರಿಯೂ ಹೌದು.
ನಿಮ್ಮ ಕಾಲದಂತೆ ವಧು-ವರರ ಹೊಂದಾಣಿಕೆ ಎನ್ನುವುದು ಸರಳವಾಗಿಲ್ಲ.
ಹಲವು ಪೋಷಕರಿಗೆ ಇಂದಿನ ಪರಿಸ್ಥಿತಿಯು ತಿಳಿಯದಾಗಿದೆ. ತಮ್ಮ ಹುಡುಗ-ಹುಡುಗಿಯರಲ್ಲಿರುವ ತೊಂದರೆ ಏನೆಂದು ಅವಲೋಕಿಸುವುದಿಲ್ಲ. ಹಲವೊಮ್ಮೆ ತಿಳಿದರೂ ಪರಿಗಣಿಸುವುದಿಲ್ಲ. ಮಗ / ಮಗಳು ಅಪೇಕ್ಷೆ ಏನೆಂದು ತಿಳಿದರೂ, ಅವರ ಅಪೇಕ್ಷೆಯಂತೆ ವಧು/ ವರ ಸಿಗುತ್ತಾರಾ ? ಅವರ ಅಪೇಕ್ಷೆ ಸರಯಾಗಿದೆಯಾ ಎಂದು ತಿಳಿಯುವುದು ಬಹಳ ಮುಖ್ಯ.
ಮಕ್ಕಳ ಮದುವೆಯು ಯೋಚನೆಗೆ ಬಂದಾಗ ಒಮ್ಮೆ ಇಂದಿನ ಪರಿಸ್ಥಿತಿಯ ಬಗ್ಗೆ ತಿಳಿಯಲು ವಧು-ವರಾನ್ವೇಷಣೆ ಕೇಂದ್ರ / ಕೌನ್ಸೆಲರ್ ಗಳಿಂದ ಸಲಹೆ ಪಡೆಯುವುದು ಒಳ್ಳೆಯದು.
ಮಕ್ಕಳಲ್ಲಿ ಸ್ನೇಹದಿಂದ ಮಾತನಾಡಿ, ಮದುವೆಯ ವಿಚಾರದಲ್ಲಿ ಸರಿಯಾದ ಒಮ್ಮತ ನಿರ್ಧಾರಕ್ಕೆ ಬರುವುದು ಒಳಿತು. ಅವರ ಅಪೇಕ್ಷೆಯಂತೆ ವಧು-ವರರು ಸಿಗುವುದು ಕಷ್ಟವಾದರೆ, ಮಕ್ಕಳಿಗೆ ಅದನ್ನು ಸಡಿಲಿಸುವಂತೆ ಸಮಜಾಯಿಸುವುದು ಸುರಕ್ಷೆ.
ಮಕ್ಕಳು – ಮಗನೇ ಇರಲಿ, ಮಗಳೇ ಇರಲಿ – ಮಾನಸಿಕವಾಗಿ ಮದುವೆಗೆ ಸಿದ್ಧವಾಗುವ ತನಕ ಮದುವೆಗೆ ಒತ್ತಾಯ ಮಾಡದಿರುವುದು ಉತ್ತಮ.
ನಿಮ್ಮ ಮಗ / ಮಗಳಿಗೆ ಸರಿಯಾದ ವಯಸ್ಸಿನಲ್ಲಿ ಮದುವೆಗೆ ಸಿದ್ಧಪಡಿಸುವುದು ನಿಮ್ಮ ಕರ್ತವ್ಯ. ನಿಮ್ಮ ದಾಂಪತ್ಯವನ್ನು ಹೇಗೆ ನೆಡೆಸಿಕೊಂಡು ಬಂದಿದ್ದೀರಿ ಎನ್ನುವುದು ಅವರ ಮಾನಸಿಕ ಸಿದ್ಧತೆಯ ಮೇಲೆ ಗಮನಾರ್ಹ ಪರಿಣಾಮವನ್ನು ಬೀರಬಲ್ಲದು ಎನ್ನುವುದು ನೆನಪಿಡಿ.
ಮದುವೆ ಗೆ ಯಾವ ವಯಸ್ಸು ಸೂಕ್ತ ಎಂದು ಚರ್ಚೆ ಯಾಗಿಲ್ಲವಲ್ಲ.
ವೈಜ್ಞಾನಿಕವಾಗಿ ಹೇಳುವುದಾದರೆ ಹೆಣ್ಣುಮಕ್ಕಳಿಗೆ 21 ರಿಂದ 25 ಹಾಗು ಗಂಡು ಮಕ್ಕಳಿಗೆ 26 ರಿಂದ 30 ವಯಸ್ಸು ಸೂಕ್ತ. ಹೆಣ್ಣು ಅಥವಾ ಗಂಡು ಮಕ್ಕಳ ಮನಸ್ತಿತಿಯನ್ನು ಪರಿಗಣಿಸಿದಾಗ ಕೊಂಚ ವೆತ್ಯಸವಗಬಹುದು.