ಬ್ರಾಹ್ಮಣರ ಹುಡುಗರ ಮದುವೆ: ಎರಡು ಪ್ರತಿಕ್ರಿಯೆ – ವಾಟ್ಸ್ ಅಪ್ ನಲ್ಲಿ ಬಂದ ಸಂದೇಶಕ್ಕೆ ವಿಮರ್ಶೆ

ಈ ಕೆಲವು ದಿನಗಳ ಹಿಂದೆ ವಾಟ್ಸಅಪ್ ಮೂಲಕ ಬಂದ ಒಂದು ಸಂದೇಶದಲ್ಲಿ

“ಬ್ರಾಹ್ಮಣ ಹುಡುಗರಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ” ಎಂಬ ಲೇಖನಕ್ಕೆ ಪೌರೋಹಿತ್ಯ ಹಾಗೂ ಅಡುಗೆ ಕೆಲಸ ಮಾಡುವವರು ಪ್ರತಿಕ್ರಿಯೆ ನೀಡಿದ್ದಾರೆ. ಆ ವೃತ್ತಿಯಲ್ಲಿನ ವಿಶೇಷತೆ ಹಾಗೂ ಪುರೋಹಿತರು ಮತ್ತು ಅಡುಗೆ ಕೆಲಸದವರನ್ನು ಮದುವೆ ಆಗುವ ಹೆಣ್ಣುಮಕ್ಕಳಿಗೆ ಇರುವ ಅನುಕೂಲತೆಗಳನ್ನು ವಿವರಿಸಿದ್ದಾರೆ.

ಪೌರೋಹಿತ್ಯ ಅನ್ನೋದು ಬ್ರಾಹ್ಮಣ ಆದವನಿಗೆ ಮೊದಲ ಆಯ್ಕೆಯ ವೃತ್ತಿ. ನೀವು ಯಾರನ್ನೂ ಸಂಭಾವನೆ ಇಷ್ಟೇ ನೀಡಿ ಎಂದು ಕೇಳುವ ಅಗತ್ಯ ಇಲ್ಲ. ಆದರೆ ಇಂದಿನ ದಿನಮಾನಕ್ಕೆ ತಕ್ಕ ಹಾಗೆ ದಕ್ಷಿಣೆ ಸಿಗುತ್ತದೆ. ಇದರ ಜತೆಗೆ ದಿನಸಿ, ವಸ್ತ್ರ ಮತ್ತಿತರ ವಸ್ತುಗಳು ದಾನದ ರೂಪದಲ್ಲಿ ಸಿಗುತ್ತವೆ. ಹಾಗಂತ ಯಾರನ್ನೋ ಬಲವಂತವಾಗಿ ಕೇಳಬೇಕಾದ ಅನಿವಾರ್ಯ ಇಲ್ಲಿಲ್ಲ. ಶ್ರದ್ಧೆ- ಭಕ್ತಿಯಿಂದ ಪೂಜೆ ಮಾಡಿ, ಕರ್ತೃವಿಗೆ ಶುಭವಾಗಲಿ ಎಂದು ಮನಸಾರೆ ಸಂಕಲ್ಪ ಮಾಡಿದರೆ ಸಾಕು ಜ್ಞಾನ, ವಿದ್ವತ್, ಅನುಷ್ಠಾನ ಇರಿಸಿಕೊಂಡ ಪುರೋಹಿತರಿಗೆ ಒಂದು ಧಾರ್ಮಿಕ ಕಾರ್ಯಕ್ರಮಕ್ಕೆ ಸಾವಿರಾರು ರುಪಾಯಿ ದಕ್ಷಿಣೆ ಸಿಗುತ್ತದೆ. ಅದರ ಹೊರತಾಗಿ ಗೌರವ ಕೂಡ ಇದೆ.

ಒಂದು ಕಂಪೆನಿಯಲ್ಲೋ ಸಂಸ್ಥೆಯಲ್ಲೋ ಕೆಲಸ ಮಾಡುವವರಂತೆ ಎಲ್ಲಾದರೂ ಹೋಗಬೇಕು ಅಂದರೆ ರಜೆ ಕೇಳಬೇಕು, ಅದಕ್ಕಾಗಿ ತಿಂಗಳುಗಟ್ಟಲೆ ಮುಂಚೆ ಅನುಮತಿ ಪಡೆಯಬೇಕು ಅಂತಿಲ್ಲ. ನಮ್ಮಲ್ಲಿ ಪಿಂಕ್ ಸ್ಲಿಪ್ ಅನ್ನೋ ಮಾತಿಲ್ಲ. ನಮ್ಮ ಆದಾಯಕ್ಕೆ ನಾವು ಕೂಡ ತೆರಿಗೆ ಕೊಡ್ತೀವಿ, ಬ್ಯಾಂಕ್ ನಲ್ಲಿ ಸಾಲ ಸಿಗುತ್ತದೆ. ನಿವೃತ್ತಿ ಅನ್ನೋದಂತೂ ದೂರದ ಮಾತಾಯಿತು. ಹಿಂದೂ ಧರ್ಮ ಪ್ರಚಾರ ತುಂಬ ಸೊಗಸಾಗಿ ಆಗುತ್ತಿದೆ.

ಕದಿರೇನಹಳ್ಳಿಯಿಂದ ಅಮೆರಿಕದಲ್ಲಿನ ನ್ಯೂಜೆರ್ಸಿಯಲ್ಲಿರುವ ದೇವಸ್ಥಾನಗಳವರೆಗೆ ಪುರೋಹಿತರ ಅಗತ್ಯ ಇದೆ. ಕಾಸ್ಟ್ ಕಟಿಂಗ್ ಅಂತ ಆದರೂ ಪುರೋಹಿತರನ್ನೇ ಕೆಲಸದಿಂದ ತೆಗೆದುಬಿಡಿ ಅನ್ನೋ ಮಾತು ಯಾರೂ ಆಡಲ್ಲ. ಪೂಜೆಗೆ ತೆರಳಿದಾಗ ದಂಪತಿ ಸಮೇತ ಬರುವುದಕ್ಕೆ ಹೇಳ್ತಾರೆ. ನಮ್ಮ ಪಾಲಿನ ಗೌರವದಲ್ಲಿ ಹೆಂಡತಿಗೂ ಪಾಲಿದೆ. ನಮ್ಮ ಧಾರ್ಮಿಕ ಪ್ರವೃತ್ತಿಗೆ ದುಶ್ಚಟಗಳಂತೂ ದೂರದ ಮಾತಾಯಿತು. ನಾವು ಮಾಡಬಹುದಾದಷ್ಟು ದಾನ ಹಾಗೂ ಉಳಿತಾಯ ಇನ್ಯಾರಿಂದಲೂ ಸಾಧ್ಯವಿಲ್ಲ. ನೈಟ್ ಶಿಫ್ಟ್ ಮಾಡಬೇಕು, ವರ್ಷಕ್ಕೊಮ್ಮೆ ಸಿಗುವ ಇನ್ ಕ್ರಿಮೆಂಟ್, ಪ್ರಮೋಷನ್ ಗೆ ಕಾಯಬೇಕು ಅಂತೇನಿಲ್ಲ. ಇಷ್ಟೆಲ್ಲ ಪ್ಲಸ್ ಪಾಯಿಂಟ್ ಯಾರಿಗಿದೆ ಹೇಳಿ.

ಅಡುಗೆ ಕಾಂಟ್ರ್ಯಾಕ್ಟ್ ತೆಗೆದುಕೊಳ್ತಾರಲ್ಲ ಒಮ್ಮೆ ಮಾತನಾಡಿಸಿ ನೋಡಿ, ಒಂದು ಕೆಲಸ ಒಪ್ಪಿದರೆ ಅವರಿಗೆ ಎಷ್ಟು ಹಣ ಉಳಿಯುತ್ತೆ ಅಂತ ಕೇಳಿ ನೋಡಿ. ನಮಗೆ ವರ್ಷದಲ್ಲಿ ಕನಿಷ್ಠ ಮೂರು ತಿಂಗಳು ರಜಾ ಸಿಕ್ಕೇ ಸಿಗುತ್ತದೆ. ಆಗ ಯಾವ ಊರನ್ನಾದದೂ ನೋಡಿ ಬರಬಹುದು. ನಾವು ಮನೆಯಲ್ಲಿದ್ದಾಗ ಹೆಂಡತಿ ಅಡುಗೆ ಮಾಡಬೇಕು ಅಂತ ಯಾವ ಕಡ್ಡಾಯವೂ ಇಲ್ಲ. ನಾವೇ ಅಡುಗೆ ಮಾಡಿ, ಅವಳಿಗೂ ಬಡಿಸ್ತೀವಿ. ನಮ್ಮ ಕೆಲಸದಲ್ಲಿ ರಿಟೈರ್ ಮೆಂಟೂ ಇಲ್ಲ, ಕೆಲಸದಿಂದ ತೆಗೆದು ಹಾಕ್ತಾರೇನೋ ಅನ್ನೋ ಭಯವೂ ಇಲ್ಲ್. ಎಲ್ಲಿವರೆಗೆ ಊಟ ಮಾಡುವ ಮಂದಿ ಇರುತ್ತಾರೋ ಅಲ್ಲಿವರೆಗೆ ಮುಂದೇನು ಅನ್ನೋ ಹೆದರಿಕೆ ಇಲ್ಲವಕಳೆಯುತ್ತದೆ ತರಕಾರಿ ಹೆಚ್ಚಿ, ನೀರು ಬಡಿಸಿ ಬರ್ತೀನಿ ಅಂದರೂ ಒಂದು ವರ್ಷದಲ್ಲಿ ಎರಡು-ಎರಡೂವರೆ ಲಕ್ಷ ಸಂಪಾದನೆಗೆ ಮೋಸವಿಲ್ಲ. ಜತೆಗೆ ಊಟ-ತಿಂಡಿಯೂ ಕಳೆಸಿಗುತ್ತದೆ.

ನಾವಾಗಿಯೇ ವಾಲಂಟರಿ ರಿಟೈರ್ ಮೆಂಟ್ ಅಂತ ತಗೊಂಡರೂ ಯಾರಾದರೂ ಮನೆಗೆ ಹೋಗಿ ಅಡುಗೆ ಮಾಡಿಟ್ಟು ಬಂದರೂ ಒಂದೆರಡು ಗಂಟೆ ಕೆಲಸಕ್ಕೆ ಸಾವಿರಾರು ರುಪಾಯಿ ಸಂಬಳ ಸಿಗುತ್ತದೆ. ಜಾಬ್ ಸೆಕ್ಯೂರಿಟಿಗೆ ಬೇಕು ಅಂತ ಇಲ್ಲ, ಮುಂದೇನು ಎಂಬ ಚಿಂತೆ ಇಲ್ಲ, ಕುಟ್ಟೋ-ರುಬ್ಬುವಂಥ ದೈಹಿಕ ಶ್ರಮದ ಕೆಲಸ ಮಾಡುವುದರಿಂದ ಆರೋಗ್ಯದ ಸಮಸ್ಯೆಯೂ ಇಲ್ಲ.”     

ಈ ಮೇಲ್ಕಂಡ ಪ್ರತಿಕ್ರಿಯೆಗೆ ವಿಮರ್ಶೆ

ಮೇಲೆ ಹೇಳಿರುವಂತೆ “ಬ್ರಾಹ್ಮಣನಾದವನಿಗೆ ಪೌರೋಹಿತ್ಯ ಅನ್ನೋದು ಮೊದಲ ಆಯ್ಕೆಯ ವೃತ್ತಿ” ಅಕ್ಷರಶಃ ನಿಜ…..

ಆದರೆ ಪೌರೋಹಿತ್ಯ ಹಾಗು ಅಡುಗೆ ಕೆಲಸವನ್ನು ಮಾಡುವವರು ತಮ್ಮ ಹೆಣ್ಣು ಮಕ್ಕಳನ್ನು ಆ ವೃತ್ತಿಯವರಿಗೆ ಕೊಡಲು ನಿರಾಕರಿಸುತ್ತಿದ್ದಾರೆ. ತಮ್ಮ ವೃತ್ತಿಯಲ್ಲಿ ಈ ಎಲ್ಲಾ ಸೌಲತ್ತುಗಳು ಇದೆಯಂದು ತಿಳಿದವರೂ, ಇಂದು ಪೌರೋಹಿತ್ಯ ಹಾಗು ಅಡುಗೆ ವೃತ್ತಿಯಲ್ಲಿರುವ ವರರನ್ನು ಕಣ್ಣೆತ್ತಿಯೂ ನೋಡುತ್ತಿಲ್ಲವೆಂಬುದು ವಿಷಾದನೀಯ.

ವಿದ್ಯಾವಂತ ಹಾಗು ಕೆಲಸಕ್ಕೆ ಹೋಗುವ ಹುಡುಗಿಯರು ಮಡಿ – ಮೈಲಿಗೆಗಳನ್ನು ಪಾಲಿಸಲು ಹಿಂಜರಿಯುವರು. ಅನುಷ್ಠಾನವನ್ನು ಪಾಲಿಸುವ ಮನೆಗಳಲ್ಲಿ ಈ ವಿಚಾರವಾಗಿ ತಾರತಮ್ಯವಾಗುವುದೆಂದು ಹಲವರು ವಧುವನ್ನು ಕೊಡಲು ನಿರಾಕರಿಸುವರು.

ಗಂಡು ಮಕ್ಕಳಿಗೆ ಸಾಮಾನ್ಯವಾಗಿ ಸೀಮಿತವಾಗಿದ್ದ ವಿದ್ಯೆ, ಇಂದು ಸರಸ್ವತಿಯು ಹೆಣ್ಣು ಮಕ್ಕಳಿಗೆ ಹೆಚ್ಚು ಒಲಿದಿದ್ದಾಳೆ. ಈ ತಾಳ ಮೇಳಗಳು ಸರಿಸಮನಾಗಿ ತೂಗುವವರಿಗೂ ಸಮುದಾಯದಲ್ಲಿ ಈ ತೊಂದರೆಗಳು ನಿಲ್ಲದು. ವ್ಯಾಪಾರ ಹಾಗು ವೃತ್ತಿಗಳಿಂದ ದೂರವಿದ್ದ ಬ್ರಾಹ್ಮಣ ಸಮುದಾಯ ಈಗಲೂ ವಧು-ವರರನ್ನು ಆರಿಸುವಾಗ ಸುಲಭವಾಗಿ ತಲೆದೂಗುವುದಿಲ್ಲ.

ಪೌರೋಹಿತ್ಯ ಹಾಗು ಅಡುಗೆಯವರಿಗೆ ತಮಗೆ ಬೇಕಾದಾಗ ಗೌರವ ಹಾಗು ಮರ್ಯಾದೆಯನ್ನು ಜನರು ಕೊಡಲು ಕಲಿತಿದ್ದಾರೆ. ಆದರೆ ಅವಶ್ಯಕತೆ ಇಲ್ಲದಾಗ ಅಸಡ್ಡೆ ತೋರುತ್ತಾರೆ. “FREE” ಎಂಬ ಫಲಕವಿರುವ ಪದಾರ್ಥಗಳನ್ನು ಕೊಳ್ಳಲು ಮುನ್ನುಗ್ಗುವ ಜನ ದಾನವಾಗಿ ಬಂದ ಸಾಮಾಗ್ರಿಗಳನ್ನು “ಬಿಟ್ಟಿ” ಬರುವುದು ಎಂದು ವ್ಯಂಗ್ಯವಾಗಿ ಮಾತಾಡುವರು. ಇಂತಹ ದೃಷ್ಟಿಕೋನ ಹೊಂದಿರುವ ಜನರನ್ನು ಬದಲಿಸುವ ದೇವರು ಯಾರು ಎಂದು ಯೋಚಿಸಬೇಕಾಗಿದೆ.

ಇಂದು 98% ಕ್ಕೂ ಹೆಚ್ಚು ಹುಡುಗಿಯರು ವಿದ್ಯಾವಂತರಾಗಿದ್ದು, ಅದರಲ್ಲೂ 3/4 ಭಾಗಶಃ ಕನ್ಯೆಯರು ಇಂಜಿನಿಯರಿಂಗ್ ಅಥವ ಉನ್ನತ ವ್ಯಾಸಂಗ ಹೊಂದಿದವರಾಗಿದ್ದಾರೆ. ಆಕೆ ಮುತ್ತೈದೆಯಂತೆ ಅಥವ ಅಡುಗೆ ಕೆಲಸದಲ್ಲಿ ಭಾಗಿಯಾಗಲು ಗಂಡನ ಜೊತೆಗೂಡಿ ಬರುವಳೆಂದು ಆಶಿಸುತ್ತಿದ್ದರೆ ಅದು ಹುಸಿ ಕನಸು ಅಷ್ಟೇ….

ಸಮಸ್ಯೆ ಏನು? ಹೇಗೆ? ಎಂದು ಎಲ್ಲರೂ ಅರಿತವರೆ. ಸುಮಾರು ೪೦% ಬ್ರಾಹ್ಮಣ ಹುಡುಗರಿಗೆ ಹಾಗು ೨೦% ಹುಡುಗಿಯರಿಗೆ ಮದುವೆಯೇ ಆಗುವುದಿಲ್ಲಾ ಎನ್ನುವುದು ಒಂದು ಅಂಕಿ ಅಂಶ ಹೇಳುತ್ತದೆ. ಬ್ರಾಹ್ಮಣ್ಯವನ್ನು ಪಾಲಿಸುತ್ತಿರುವವರು ಈ ೪೦% ನಲ್ಲೆ ಸೇರಿದ್ದಾರೆ. ಹಾಗಾದರೆ ಮುಂದಿನ ಪೀಳಿಗೆಯಲ್ಲಿ ಬ್ರಾಹ್ಮಣರಿರಬಹುದು, ಆದರೆ ಬ್ರಾಹ್ಮಣ್ಯದ ಕಥೆ ?

ಈ ಪರಿಸ್ಥಿತಿಯನ್ನು ಸುಲಭವಾಗಿ ಪರಿವರ್ತಿಸಲು ಸಾಧ್ಯವಿಲ್ಲವೆಂದು ತಿಳಿದೇ ನಮ್ಮ ಮಠಾಧಿಪತಿಗಳು, ಹಿರಿಯರು, ಮುಖಂಡರುಗಳು, ಸಂಘ-ಸಂಸ್ಥೆಗಳು ಈ ವಿಚಾರದಲ್ಲಿ ಇಂದು ಸದ್ದು ಮಾಡದೇ ಕುಳಿತಿರುವುದು. ಹಾಗೆಯೇ ಮುಂದೊಂದು ದಿನ ಈ ಪರಿಸ್ಥಿತಿಯು ಸಮಾನತೆಗೆ ಬರುವುದೆಂದು ಆಶಿಸುವುದಷ್ಟೇ ವಿನಃ, ಬೇರೆ ದಾರಿ ಕಾಣದಾಗಿದೆ.

ನಮ್ಮ ಸಮುದಾಯ ಕಂಡ ಒಂದು ಸ್ಪೂರ್ತಿಯ ಕಥೆ ಇಲ್ಲಿ ನೆನಪು ಮಾಡಬಹುದಷ್ಟೆ. 

“ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್” ಅನ್ನುವಂತಹ ಕಾಲ ಸುಮಾರು 15 – 20 ವರ್ಷಗಳ ಹಿಂದೆ ಇತ್ತು. ಹುಡುಗಿ ಲಕ್ಷಣವಿಲ್ಲ, ಕೆಲಸವಿಲ್ಲ, ಬಣ್ಣವಿಲ್ಲ, ಮೂಗು ಉದ್ದ, ಜಡೆ ಸಣ್ಣ, ತುಟಿ ದಪ್ಪ, ವರದಕ್ಷಿಣೆ ಸಾಲದು ಎಂದೆಲ್ಲಾ ಹೇಳಿ ಹೆಣ್ಣುಮಕ್ಕಳನ್ನು ನಿರಾಕರಿಸಿ ನೊಂದಿಸಿದವರೆಷ್ಟೋ. ಮದುವೆಯಾಗದೆ ಉಳಿದ ಕನ್ಯೆಯರೆಷ್ಟೋ, ಮಾತಾಪಿತೃಗಳು ಅತ್ಮಹತ್ಯೆಗೆ ಬಲಿಯಾದವರೆಷ್ಟೋ. ಅಂದು ಹೆಣ್ಣು ಮಕ್ಕಳು ಹಾಗು ಹೆಣ್ಣು ಹೆತ್ತವರ ಪರಿಸ್ಥಿತಿ ವಿಷಾದನೀಯವಾಗಿತ್ತು. ಮದುವೆಯು ಆಗದಿದ್ದರೂ ಪರವಾಗಿಲ್ಲಾ, ಜೀವನಕ್ಕೆ ಒಂದು ಆಧಾರವಿರಲಿ, ತಮ್ಮ ಕಾಲು ಮೇಲೆ ತಾವು ನಿಲ್ಲಲಿ ಎಂದು ಹೆಣ್ಣುಮಕ್ಕಳಿಗೆ ವಿದ್ಯೆಯನ್ನು ಕೊಡಿಸಲು ಮುಂದಾದರು. ಆ ಸಮಯದಲ್ಲಿ ವಿದ್ಯೆ ಅನ್ನುವುದು ಭವಿಷ್ಯವನ್ನೇ ಬದಲಿಸುವ ಅಸ್ತ್ರವಾಗುವುದು ಎಂದು ಯಾರೂ ತಿಳಿದಿರಲಿಲ್ಲ.  ಕ್ರಮೇಣ ಕಾಲ ಇದನ್ನು ಬದಲಾಯಿಸಿತು, ಹೆಣ್ಣು ಹೆತ್ತವರು ಹಾಗು ಹೆಣ್ಣುಮಕ್ಕಳು ತಮ್ಮ ದಾರಿಯನ್ನು ತಾವೇ ಹುಡುಕಿಕೊಂಡಿರುವರೆಂದರೆ ಉತ್ಪ್ರೇಕ್ಷೆಯಾಗದು.  

  

0Shares

You may also like...

Leave a Reply

Your email address will not be published. Required fields are marked *